ಮಂಗಳೂರು, ಆಗಸ್ಟ್ 19 : ಬಂಧಿತ ಆರೋಪಿಯನ್ನು ಉಳ್ಳಾಲದ ಕೋಡಿ ನ್ಯೂ ತೋಟ ಹೌಸ್, ಬೈತುಲ್ ಕೌಸರ್ ನಿವಾಸಿ ಲೇಟ್ ಇಬ್ರಾಹಿಂ ಅವರ ಪುತ್ರ ಮಹಮ್ಮದ್ ಫೈಸಲ್ ಅಲಿಯಾಸ್ ತೋಟ ಫೈಸಲ್ (40) ಎಂದು ಗುರುತಿಸಲಾಗಿದೆ. ಕಳೆದ ಜುಲೈ 24, 2026 ರಂದು ಕೋಡಿಕಲ್‌ನ ಮನೆಯೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ KA-19-EB-2226 ನೋಂದಣಿ ಸಂಖ್ಯೆಯ ಹೋಂಡಾ ಡಿಯೋ ಸ್ಕೂಟರ್ ಕಳುವಾಗಿತ್ತು. ಈ ಸಂಬಂಧ ಸ್ಕೂಟರ್ ಮಾಲೀಕರು ನೀಡಿದ ದೂರಿನ ಮೇರೆಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಉರ್ವ ಪೊಲೀಸರು ಘಟನಾ ಸ್ಥಳ ಮತ್ತು ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಕಳ್ಳನ ಚಲನವಲನ ಹಾಗೂ ಚಹರೆ ಪತ್ತೆಯಾಗಿದೆ. ಜೊತೆಗೆ ಪೊಲೀಸ್ ಮಾಹಿತಿದಾರರಿಂದ ಬಂದ ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆಗಸ್ಟ್ 18ರ ಮಂಗಳವಾರ ಆರೋಪಿ ತೋಟ ಫೈಸಲ್‌ನನ್ನು ಕಳವು ಮಾಡಿದ್ದ ದ್ವಿಚಕ್ರ ವಾಹನ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖೆಯ ವೇಳೆ ಈತನ ವಿರುದ್ಧ ಕರ್ನಾಟಕ ಮತ್ತು ಕೇರಳ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೋಬ್ಬರಿ 40ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಮಂಗಳೂರು ಉತ್ತರ, ಕೊಣಾಜೆ, ಉಳ್ಳಾಲ, ಮೂಡುಬಿದಿರೆ, ಬಂಟ್ವಾಳ ಗ್ರಾಮಾಂತರ ಹಾಗೂ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯ ಕೇಸ್‌ಗಳಲ್ಲಿ ಈತನ ವಿರುದ್ಧ ನ್ಯಾಯಾಲಯದಿಂದ ವಾರಂಟ್‌ಗಳು ಬಾಕಿ ಇರುವುದು ತಿಳಿದುಬಂದಿದೆ. ಪ್ರಸ್ತುತ ಆರೋಪಿಯ ವಿರುದ್ಧ BNS 2023 ರ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಉರ್ವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ : Belthangady : ಇಂದಬೆಟ್ಟು ನೇತ್ರಾವತಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ; ಖಾಕಿ ದಾಳಿಗೆ ಓರ್ವ ಅರೆಸ್ಟ್, 2 ಟಿಪ್ಪರ್ ಜಪ್ತಿ!